

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳ ಅನೇಕ ರೈತರು ಉತ್ತಮ ಲಾಭ ಮತ್ತು ಆದಾಯವನ್ನು ಪಡೆಯಲು ಅಡಿಕೆ ತೋಟವನ್ನು ನೆಡಲು ಯೋಜಿಸುತ್ತಿದ್ದಾರೆ. ನೀವು ಅಡಿಕೆ ಬೆಳೆ ಬೆಳೆಯಲು ಆಸಕ್ತಿ ಹೊಂದಿದ್ದೀರಾ ? ಹಾಗಾದರೆ ದಯವಿಟ್ಟು ಈ ಕೆಳಗಿನ ಪ್ರಮುಖ ಸಲಹೆಗಳನ್ನು ನೋಡಿ.
ಸೂಕ್ತವಾದ ಮಣ್ಣು ಮತ್ತು ಹವಾಮಾನ ಸ್ಥಿತಿಗಳು:
ಸೂಕ್ತವಾದ ಮಣ್ಣು ಮತ್ತು ಹವಾಮಾನ ಸ್ಥಿತಿಗಳು:

ಅಡಿಕೆಯು 15° ಸೆಲ್ಸಿಯಸ್ ಮತ್ತು 35° ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಕಡಿಮೆ ಏರಿಳಿತದ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ ಮತ್ತು 10°C ಗಿಂತ ಕಡಿಮೆ ಮತ್ತು 40°C ಗಿಂತ ಹೆಚ್ಚಿನ ತಾಪಮಾನದಿಂದ ಕೆಟ್ಟ ಪರಿಣಾಮ ಬೀರುತ್ತದೆ. ಅಡಿಕೆಯು ಹೆಚ್ಚಿನ ತಾಪಮಾನ ಮತ್ತು ಮಣ್ಣಿನಲ್ಲಿ ನೀರಿನ ನಿಲ್ಲುವಿಕೆಗೆೆ ಬಹಳ ಸೂಕ್ಷ್ಮತೆಯನ್ನು ಹೊಂದಿದ್ದು ಇದು ಗಿಡಗಳ ಮೇಲೆ ತೀವ್ರ ಪರಿಣಾಮ ಬೀರಬಲ್ಲದು.


ತಳಿಗಳು
ತಳಿಗಳು
ಸ್ಥಳೀಯ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ಮಾನ್ಯತೆ ಪಡೆದ ಕೆಲವು ಭರವಸೆಯ ಸ್ಥಳೀಯ ತಳಿಗಳು ಇವೆ. ಅವುಗಳೆಂದರೆ ತೀರ್ಥಹಳ್ಳಿ ಲೋಕಲ್, ಸೌತ್ ಕೆನ್ರಾ ಲೋಕಲ್, ಶ್ರೀವರ್ಧನ್ ಮತ್ತು ಹಿರೇಹಳ್ಳಿ ಲೋಕಲ್. ಇವು ಸಾಮಾನ್ಯವಾಗಿ ಎತ್ತರಕ್ಕೆ ಬೆಳೆಯುತ್ತವೆ ಮತ್ತು ಫಸಲು ಬಿಡಲು ಪ್ರಾರಂಭಿಸಲು ಸುಮಾರು 6 ವರ್ಷಗಳು ಬೇಕಾಗುತ್ತವೆ.
ವಿವಿಧ ವಿಶ್ವವಿದ್ಯಾಲಯಗಳು ಕೆಲವು ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಿವೆ ಈ ಸುಧಾರಿತ ತಳಿಗಳು ಬೇಗ ಫಸಲು ಬಿಡಲು ಪ್ರಾರಂಭಿಸುತ್ತವೆ, ಸಮಾನ ಗಾತ್ರದ ಕಾಯಿಗಳನ್ನು ಬಿಡುತ್ತವೆ ಮತ್ತು ಉತ್ತಮ ಇಳುವರಿ ಸಾಮರ್ಥ್ಯವನ್ನು ಹೊಂದಿರುತ್ತವೆ.


ವಿವಿಧ ಪ್ರದೇಶಗಳಿಗೆ ಸೂಕ್ತವಾದ ತಳಿಗಳು
ವಿವಿಧ ಪ್ರದೇಶಗಳಿಗೆ ಸೂಕ್ತವಾದ ತಳಿಗಳು
➥ ಕರಾವಳಿ ಪ್ರದೇಶ: ಮಂಗಳಾ, ಸುಮಂಗಲಾ, ಶ್ರೀಮಂಗಲ, ಸರ್ವಮಂಗಲ, ವಿಠ್ಠಲ ಅಡಿಕೆ ಹೈಬ್ರಿಡ್1 ಮತ್ತು 2
➥ ಪಶ್ಚಿಮ ಬಂಗಾಳ ರಾಜ್ಯ: ಮೋಹಿತ್ ನಗರ
➥ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳು: ಕಹಿಕುಚಿ (ವಿಟಿಎಲ್-64)
➥ ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶ: ಕ್ಯಾಲಿಕಟ್-17
ಅಡಿಕೆ ಸಸಿಗಳನ್ನು ಬೆಳೆಸುವುದು ಹೇಗೆ
ಅಡಿಕೆ ಸಸಿಗಳನ್ನು ಬೆಳೆಸುವುದು ಹೇಗೆ
ಬೀಜಗಳಿಂದ ಮಾತ್ರ ಅಡಿಕೆಯನ್ನು ಬೆಳೆಸಬಹುದು ಮತ್ತು ಕೆಳಗೆ ಅನುಸರಿಸಬೇಕಾದ ಹಂತಗಳಿವೆ.
ತಾಯಿ ಮರದ ಆಯ್ಕೆ
ತಾಯಿ ಮರದ ಆಯ್ಕೆ
ಬೇಗನೆ ಮತ್ತು ನಿರಂತರವಾಗಿ ಫಸಲು ಬಿಡುವಂತಹ, ಹೆಚ್ಚು ಎಲೆಗಳನ್ನು ಹೊಂದುವ, ಗೆಣ್ಣುಗಳ ನಡುವೆ ಕಡಿಮೆ ಅಂತರ ಹೊಂದಿರುವ, ಮತ್ತು ಹೆಚ್ಚಿನ ಕಾಯಿ ಬಿಡುವಂತಹ ಗುಣಗಳನ್ನು ನೋಡಿ ತಾಯಿ ಮರವನ್ನು ಆಯ್ಕೆ ಮಾಡಬೇಕು. ಈ ಮರಗಳಿಂದ ಸಸಿಮಾಡಲು ಹಣ್ಣುಗಳನ್ನು ಆಯ್ಕೆ ಮಾಡಬೇಕು ಹಾಗು ತಾಯಿ ಮರವು ಕೀಟ ಮತ್ತು ರೋಗಗಳಿಂದ ಮುಕ್ತವಾಗಿರಬೇಕು ಮತ್ತು ಮಧ್ಯಮ ವಯಸ್ಸಿನದ್ದಾಗಿರಬೇಕು.


ಬೀಜದ ಕಾಯಿ ಆಯ್ಕೆ
ಬೀಜದ ಕಾಯಿ ಆಯ್ಕೆ
35 ಗ್ರಾಂ ಗಿಂತ ಹೆಚ್ಚಿನ ತೂಕದ ಸಂಪೂರ್ಣ ಮಾಗಿದ ಹಣ್ಣುಗಳನ್ನು ಆಯ್ಕೆ ಮಾಡಬೇಕು, ಆ ವರ್ಷದ 2 ಅಥವಾ 3ನೇ ಕೊಯ್ಲು ಸಮಯದಲ್ಲಿ ಮರದ ಮಧ್ಯದ ಗೊಂಚಲಿನಿಂದ ಕಾಯಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡಿದ ಹಣ್ಣುಗಳನ್ನು ನೀರಿನಲ್ಲಿ ಹಾಕಿದಾಗ, ತೊಟ್ಟನ್ನು ಮೇಲ್ಮುಖವಾಗಿ ಸೂಚಿಸುತ್ತಾ ತೇಲುತ್ತಿರುವ ಹಣ್ಣುಗಳನ್ನು ಮಾತ್ರ ನೋಡಿ ಆಯ್ಕೆ ಮಾಡಿಕೊಳ್ಳಬೇಕು. ಈ ರೀತಿಯ ಬೀಜಗಳನ್ನು ನೆಟ್ಟರೆ ವೇಗವಾಗಿ ಮತ್ತು ಆರೋಗ್ಯಕರ ಬೆಳವಣಿಗೆಯ ಮೊಳಕೆಗಳನ್ನು ಪಡೆಯಬಹುದು.


ನರ್ಸರಿ ನಿರ್ವಹಣೆ
ನರ್ಸರಿ ನಿರ್ವಹಣೆ
ಕೊಯ್ಲು ಮಾಡಿದ ತಕ್ಷಣ ಆಯ್ದ ಇಡೀ ಅಡಿಕೆ ಕಾಯಿಯನ್ನು 10 ಸೆಂಟಿಮೀಟರ್ ಅಂತರದೊಂದಿಗೆ ನರ್ಸರಿಯ ಬೆಡ್ ನಲ್ಲಿ ಬಿತ್ತಬೇಕು. ಬೀಜಗಳನ್ನು ನೆಟ್ಟಗೆ ಕಾಂಡದ ತುದಿ ಮೇಲ್ಮುಖವಾಗಿ ಬಿತ್ತಬೇಕು ಮತ್ತು ಅದರ ಮೇಲೆ ತೆಳುವಾದ ಮರಳಿನ ಪದರದಿಂದ ಮುಚ್ಚಬೇಕು ಮತ್ತು ನರ್ಸರಿ ಬೆಡ್ ಅನ್ನು ಭತ್ತದ ಹುಲ್ಲು ಅಥವಾ ಅಡಿಕೆ ಎಲೆಗಳಿಂದ ಮುಚ್ಚಿ ಪ್ರತಿದಿನ ನೀರು ಹಾಕಬೇಕು. 3 ತಿಂಗಳ ನಂತರ ಸಸಿಗಳನ್ನು 30 X 30 ಸೆಂಟಿಮೀಟರ್ ಅಂತರದೊಂದಿಗೆ ಇನ್ನೊಂದು ನರ್ಸರಿ ಬೆಡ್ ಗೆ ಸ್ಥಳಾಂತರಿಸಬೇಕು ಅಥವಾ ನೇರವಾಗಿ 150-ಗೇಜ್ ನ 25 X 15 ಸೆಂಟಿಮೀಟರ್ ಅಗಲದ ಪಾಲಿಥೀನ್ ಚೀಲಗಳಲ್ಲಿ ನೆಡಬಹುದು. ಈ ಪಾಲಿಥೀನ್ ಚೀಲಗಳನ್ನು ಮೇಲ್ಪದರದ ಮಣ್ಣು: ಕೊಟ್ಟಿಗೆ ಗೊಬ್ಬರ: ಮರಳನ್ನು 7: 3: 2 ರ ಅನುಪಾತದೊಂದಿಗೆ ಮಾಡಿದ ಮಿಶ್ರಣದಿಂದ ತುಂಬಬೇಕು. ಸಸಿಗಳನ್ನು ಯಾವಾಗಲೂ ನೆರಳಿನಲ್ಲಿ ಇಡಬೇಕು ಮತ್ತು ನಿಯಮಿತವಾಗಿ ನೀರನ್ನು ಕೊಡಬೇಕು.




ಸಸಿಗಳ ಆಯ್ಕೆ
ಸಸಿಗಳ ಆಯ್ಕೆ
ಪಾಲಿಬ್ಯಾಗ್‌ನಲ್ಲಿ ಬೆಳೆದ ಸಸಿಗಳು, ತೋಟದಲ್ಲಿ ಚೆನ್ನಾಗಿ ಸ್ಥಾಪನೆಯಾಗಿ ಬೆಳೆಯುತ್ತದೆ, 12 ರಿಂದ 16 ತಿಂಗಳ ವಯಸ್ಸಿನ ಸಸಿಗಳಲ್ಲಿ 5 ಅಥವಾ ಹೆಚ್ಚಿನ ಎಲೆಗಳನ್ನು ಹೊಂದಿರುವ “ಕಡಿಮೆ ಎತ್ತರ” ಮತ್ತು “ಹೆಚ್ಚು ಕಾಂಡದ ಸುತ್ತಳತೆ” ಯನ್ನು ಹೊಂದಿರುವ ಸಸಿಯನ್ನು ಆಯ್ಕೆ ಮಾಡಬೇಕು.


ಅಂತರ
ಅಂತರ
ಸಾಮಾನ್ಯವಾಗಿ, 9 ಅಡಿ x 9 ಅಡಿ ಅಂತರವನ್ನು ಅನುಸರಿಸಲಾಗುತ್ತದೆ, ಇದರೊಂದಿಗೆ ಎಕರೆಗೆ ಸುಮಾರು 538 ಗಿಡಗಳನ್ನು ನೆಡಬಹುದು. ಇದರ ಹೊರತಾಗಿ, ಸಾಲುಗಳ ನಡುವೆ 10 ಅಡಿ ಮತ್ತು ಗಿಡದ ನಡುವೆ 8 ರಿಂದ 10 ಅಡಿ ಅಂತರವನ್ನು ಅನುಸರಿಸಬಹುದು, ಈ ಅಗಲವಾದ ಸಾಲಿನ ಅಂತರವನ್ನು ಅನುಸರಿಸುವುದರಿಂದ ಮಿಶ್ರಬೆಳೆಗಳನ್ನು ಬೆಳೆಯಲು ನೆರವಾಗುತ್ತದೆ.


ಸಸಿಗಳನ್ನು ತೋಟದಲ್ಲಿ ನೆಡುವ ಸಮಯ
ಸಸಿಗಳನ್ನು ತೋಟದಲ್ಲಿ ನೆಡುವ ಸಮಯ


ಸಾಮಾನ್ಯವಾಗಿ ಮೇ - ಜೂನ್ ನಲ್ಲಿ ಮುಂಗಾರು ಮಳೆಯು ಪ್ರಾರಂಭಿಸಿದಂತೆ ನಾಟಿ ಮಾಡಲಾಗುತ್ತದೆ. ಆದರೆ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ, ಮುಂಗಾರು ಮಳೆ ತೀವ್ರವಾಗಿರುವ ಪ್ರದೇಶಗಳಲ್ಲಿ, ಮತ್ತು ಕಳಪೆ ನೀರಿನ ಒಳಚರಂಡಿ ಇರುವ ಪ್ರದೇಶಗಳಲ್ಲಿ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ನಾಟಿ ಮಾಡಬೇಕು ಮತ್ತು ಮಳೆ ಆರಂಭವಾಗುವವರೆಗೆ ನೆಟ್ಟ ಸಸಿಗಳಿಗೆ ನಿಯಮಿತವಾಗಿ ನೀರನ್ನು ಕೊಡಬೇಕು.
ಸಸಿಗಳಿಗೆ ನೆರಳು ಒದಗಿಸುವುದು
ಸಸಿಗಳಿಗೆ ನೆರಳು ಒದಗಿಸುವುದು
ಅಡಿಕೆ ಸಸಿಗಳು ಬಿಸಿಲಿನ ಬೇಗೆಗೆ ಹೆಚ್ಚು ಹಾನಿಗೊಳಗಾಗುತ್ತವೆ, ಆದ್ದರಿಂದ ನೇರವಾಗಿ ಬರುವ ಸೂರ್ಯನ ಬೆಳಕನ್ನು ಅಡ್ಡಗಟ್ಟಲು ಅಡಿಕೆ ಸೋಗೆ ಮತ್ತು ಹಾಳೆಯನ್ನು ಗೂಟಗಳ ಸಹಾಯದಿಂದ ಮರೆಮಾಡಲು ಬಳಸಬೇಕು, ಮಧ್ಯಾಹ್ನದಿಂದ ಸಂಜೆಯವರೆಗೆ (12 pm ರಿಂದ 4 pm) ದಕ್ಷಿಣ ಹಾಗು ನೈರುತ್ಯ ದಿಕ್ಕಿನಿಂದ ಬರುವ ಬಿಸಿಲಿಗೆ ಮಾತ್ರಾ ಅಡ್ಡಲಾಗಿಟ್ಟು ಉಳಿದ ದಿಕ್ಕಿನಲ್ಲಿ ಗಾಳಿಯು ಓಡಾಡುವಂತೆ ಮರೆಯನ್ನು ನಿರ್ಮಿಸಬೇಕು. ಅಡಿಕೆ ಸಸಿಗಳ ಸಾಲುಗಳ ನಡುವೆ ಬಾಳೆ ಬೆಳೆಗಳನ್ನು ಬೆಳೆಯುವ ಮೂಲಕವು ನೆರಳು ಒದಗಿಸಬಹುದು.


ಪೋಷಕಾಂಶಗಳ ನಿರ್ವಹಣೆ
ಪೋಷಕಾಂಶಗಳ ನಿರ್ವಹಣೆ
ಅಡಿಕೆಯು ಬಹುವಾರ್ಷಿಕ ಬೆಳೆಯಾಗಿರುವ ಕಾರಣ ವರ್ಷವಿಡೀ ವಿಭಜಿತ ಡೋಸ್ ಗಳಲ್ಲಿ ಪೋಷಕಾಂಶಗಳನ್ನು ಅನ್ವಯಿಸುವ ಅಗತ್ಯವಿದೆ. ಪ್ರತಿ ಮರಕ್ಕೆ, ಒಂದು ವರ್ಷದ ಅವಧಿಯಲ್ಲಿ 100 ಗ್ರಾಂ N (220 ಗ್ರಾಂ ಯೂರಿಯಾ), 40 ಗ್ರಾಂ P (200 ಗ್ರಾಂ ರಾಕ್ ಫಾಸ್ಫೇಟ್) ಮತ್ತು 140 ಗ್ರಾಂ K (235 ಗ್ರಾಂ ಮುರಿಯಾಟ್ ಆಫ್ ಪೊಟ್ಯಾಶ್) ನಷ್ಟು NPK, ಹಾಗು 12 ಕೆಜಿ ಯಷ್ಟು ಹಸಿರು ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು 3 ಅಥವಾ ಕನಿಷ್ಠ 2 ವಿಭಜಿತ ಡೋಸ್ ಗಳಲ್ಲಿ ನೀಡಬೇಕು.


ಆಂತರಿಕ ಬೇಸಾಯ ಪದ್ಧತಿಗಳು
ಆಂತರಿಕ ಬೇಸಾಯ ಪದ್ಧತಿಗಳು
ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಮಳೆಗಾಲ ಮುಗಿದ ನಂತರ, ಕಳೆ ಕೀಳಬೇಕು ಮತ್ತು ಗಟ್ಟಿಯಾದ ಮಣ್ಣಿನ ಹೊರಪದರವನ್ನು ಪುಡಿಮಾಡಲು ಅಗೆಯುವುದು ಅಥವ ಉಳುಮೆ ಮಾಡಬೇಕು, ಮಣ್ಣಿನ pH ಆಧಾರದ ಮೇಲೆ 2 ವರ್ಷಗಳಿಗೊಮ್ಮೆ ಸುಣ್ಣ ಅಥವಾ ಜಿಪ್ಸಮ್ ಅನ್ನು ಉಳುಮೆಯ ಸಮಯದಲ್ಲಿ ಹಾಕುವಮೂಲಕ ಸರಿಯಾದ pH ಮಟ್ಟವನ್ನು ಕಾಪಾಡಿಕೊಳ್ಳಬೇಕು.


ನೀರಾವರಿ
ನೀರಾವರಿ
ಅಡಿಕೆಯ ಜೊತೆಗೆ ಅಂತರಬೆಳೆ ಬೆಳೆದರೆ ಅಥವ ಸಾಕಷ್ಟು ನೀರು ಲಭ್ಯವಿದ್ದರೆ ಸ್ಪ್ರಿಂಕ್ಲರ್ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು. ಇದಲ್ಲದೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಲಾಭಗಳಿವೆ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಎದುರಾದರೆ ಹನಿ ನೀರಾವರಿ ಬಳಸಬೇಕು, ಸ್ಪ್ರಿಂಕ್ಲರ್ ಪದ್ಧತಿಯಲ್ಲಿ ಬಳಸುವ ನೀರಿನ ಕೇವಲ 1/10 ನೇ ಭಾಗ ನೀರು ಹನಿ ನೀರಾವರಿ ಪದ್ಧತಿಯಲ್ಲಿ ಬಳಸಲ್ಪಡುತ್ತದೆ. ಡ್ರಿಪ್ ಸಿಸ್ಟಮ್ ಅನ್ನು ಸ್ಥಾಪಿಸಿದ ನಂತರ, ಶಿಫಾರಸು ಮಾಡಲಾದ NPK ಮತ್ತು ಸೂಕ್ಷ್ಮ ಪೋಷಕ ರಸಗೊಬ್ಬರಗಳನ್ನು ನೀರಿನ ಮುಕಾಂತರ ಹನಿ ನೀರಾವರಿ ಪದ್ದತಿಯಲ್ಲಿ ನೇರವಾಗಿ ಗಿಡಗಳಿಗೆ ಕೊಡಬೊಹುದು. ಶಿಫಾರಸು ಮಾಡಿದ ಡೋಸೇಜ್ ಅನ್ನು 10 ಸಮನಾದ ಭಾಗಗಳಾಗಿ ವಿಭಜಿಸಿ, ನವೆಂಬರ್ ನಿಂದ ಮೇ ವರೆಗೆ 20 ದಿನಗಳ ಅಂತರದೊಂದಿಗೆ ಹನಿ ನೀರಾವರಿಯೊಂದಿಗೆ ರಸಗೊಬ್ಬರಗಳನ್ನು ಅನ್ವಯಿಸಿದರೆ ಬಹಳ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.


ಅಂತರ ಬೆಳೆ / ಮಿಶ್ರ ಬೆಳೆ
ಅಂತರ ಬೆಳೆ / ಮಿಶ್ರ ಬೆಳೆ
ಅಡಿಕೆ ಸಸಿ ನೆಟ್ಟ ನಂತರದ ಆರಂಭಿಕ 5 ವರ್ಷಗಳಲ್ಲಿ, ಬಾಳೆ ಒಂದು ಪ್ರಮುಖ ಅಂತರ ಬೆಳೆಯಾಗಿದೆ, ಇದು ಅಡಿಕೆ ಸಸಿಗಳಿಗೆ ಅವಶ್ಯವಿರುವ ನೆರಳನ್ನು ಒದಗಿಸುತ್ತದೆ. ಇದನ್ನು ಹೊರತುಪಡಿಸಿ ತರಕಾರಿಗಳು, ಹೂವಿನ ಬೆಳೆಗಳು, ಔಷಧೀಯ ಸಸ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯನ್ನಾಗಿ ಬೆಳೆಯಬಹುದು. ಅಂತರಬೆಳೆಯಿಂದಾಗಿ ಕಳೆಗಳನ್ನು ನಿಯಂತ್ರಿಸಬಹುದು ಮತ್ತು ಅವುಗಳ ಬೆಳೆಅವಧಿಯ ನಂತರ ಹಸಿರು ಗೊಬ್ಬರ ಮತ್ತು ಮಲ್ಚಿಂಗ್ ಗಾಗಿಯು ಬಳಸಬಹುದು. ಹಾಗು ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಸಾರಜನಕವು ಹೆಚ್ಚುತ್ತದೆ.
ಅಡಿಕೆ ಮರಗಳನ್ನು ನೆಟ್ಟ 5 ವರ್ಷಗಳ ನಂತರ, ಅಡಿಕೆ ಮರವನ್ನು ಬೆಂಬಲವಾಗಿಸಿಕೊಂಡು ಬೆಳೆಯುವ ಕರಿಮೆಣಸು, ವೀಳ್ಯದೆಲೆ ಮತ್ತು ವೆನಿಲ್ಲಾ ದಂತಹ ಬೆಳೆಗಳನ್ನು ಅಡಿಕೆ ಮರದ ಬುಡದಲ್ಲಿ ನೆಡುವ ಮೂಲಕ ಮಿಶ್ರ ಬೆಳೆಯಾಗಿ ಬೆಳೆಯಬಹುದು.
ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಬಾಳೆ, ನಿಂಬೆ, ಕಿತ್ತಳೆ, ಕೋಕೋ, ಏಲಕ್ಕಿ, ಕಾಫಿ ಯಂತಹ ಬೆಳೆಗಳನ್ನು 4 ಅಡಿಕೆ ಮರಗಳ ನಡುವಿನ ಜಾಗದಲ್ಲಿ ಒಂದು ಸಸ್ಯವನ್ನು ನೆಡುವ ಮೂಲಕ ಬೆಳೆಯಬಹುದು.
ತೋಟದ ಗಡಿಗಳಲ್ಲಿ ಕಾಡು ಮರಗಳು, ಹಣ್ಣಿನ ಮರಗಳು, ಮಸಾಲೆ ಪದಾರ್ಥದ ಮರಗಳು ಮತ್ತು ತೆಂಗಿನಕಾಯಿಯನ್ನು ಬೆಳೆಯಬಹುದು.


ಕೊಯ್ಲು
ಕೊಯ್ಲು
ಸಸ್ಯವು ಉತ್ತಮ ಬೆಳವಣಿಗೆಯನ್ನು ಹೊಂದುವ ನಿಟ್ಟಿನಲ್ಲಿ, ನೆಟ್ಟ ಮೊದಲ 3 ವರ್ಷಗಳಲ್ಲಿ ಬರುವ ಹಿಂಗಾರಗಳನ್ನು ತೆಗೆದುಹಾಕಬೇಕು. ಆರಂಭಿಕ ಕೆಲ ವರ್ಷಗಳಲ್ಲಿ ಉದ್ದವಾದ ದೋಟಿಯನ್ನು ಬಳಸಿ ಕೊಯ್ಲು ಮಾಡಬಹುದು, ಆದರೆ ಸಂಪೂರ್ಣವಾಗಿ ಬೆಳೆದ ಮರಗಳಿಂದ ಕೊಯ್ಲು ಮಾಡಲು ನುರಿತ ಕೊನೆಗಾರರ ಅವಶ್ಯಕತೆ ಇರುತ್ತದೆ, ಅವರು ಸಾಮಾನ್ಯವಾಗಿ ದಿನಕ್ಕೆ 100 ಮರಗಳಿಂದ ಕೊಯ್ಲು ಮಾಡಬಲ್ಲರು. ಅಡಿಕೆ ಮರಗಳು ಉತ್ತಮ ನಿರ್ವಹಣೆಯ ತೋಟಗಳಲ್ಲಿ 7ನೇ ವರ್ಷದಿಂದ 40ನೇ ವರ್ಷದವರೆಗೆ ಉತ್ತಮ ಇಳುವರಿಯನ್ನು ನೀಡುತ್ತವೆ, 40 ವರ್ಷಗಳ ನಂತರ ಇಳುವರಿ ಕಡಿಮೆಯಾಗುತ್ತದೆ ಮತ್ತು ನಿರ್ವಹಣಾ ವೆಚ್ಚವು ತುಲನಾತ್ಮಕವಾಗಿ ಹೆಚ್ಚಾಗುವುದರಿಂದ ಲಾಭದಾಯಕವಾಗಿರುವುದಿಲ್ಲ. ಮರವು ಹಳೆಯದಾದಾಗ, ಹಳೆಯ ಮರದ ಪಕ್ಕದಲ್ಲಿ ಹೊಸ ಸಸಿಯನ್ನು ನೆಡಬೇಕು ಮತ್ತು ಹೊಸ ಸಸ್ಯವು ಇಳುವರಿ ನೀಡಲು ಆರಂಭಿಸಿದಾಗ ಹಳೆಯ ಲಾಭದಾಯಕವಲ್ಲದ ಮರವನ್ನು ಕಡಿಯಬೇಕು.


ಇಳುವರಿ ಮತ್ತು ಸಂಸ್ಕರಣೆ
ಇಳುವರಿ ಮತ್ತು ಸಂಸ್ಕರಣೆ
ಇಳುವರಿಯು ಪೋಷಕಾಂಶ ನಿರ್ವಹಣೆ ಮತ್ತು ತೋಟದಲ್ಲಿನ ಕೀಟಗಳು ಮತ್ತು ರೋಗಗಳ ನಿಯಂತ್ರಣವನ್ನು ಅವಲಂಬಿಸಿರುತ್ತದೆ. ಇಳುವರಿ ಪ್ರಮಾಣವು ಕಾಯಿಯ ಕೊಯ್ಲು ಹಂತದ ಆಧಾರದ ಮೇಲೆ ಮತ್ತು ಅದರ ಸಂಸ್ಕರಣೆಯ ವಿಧಾನದ ಮೇಲೆ ಬದಲಾಗುತ್ತದೆ. ಅಡಿಕೆಯಲ್ಲಿ 2 ಮುಖ್ಯ ಸಂಸ್ಕರಣಾ ವಿಧಾನಗಳು ಈ ಕೆಳಗಿನಂತಿವೆ.
-
ಕಾಲಿಪಾಕ್: ಈ ರೀತಿಯ ಸಂಸ್ಕರಣೆಯನ್ನು ಕರ್ನಾಟಕ ಮತ್ತು ಕೇರಳದಲ್ಲಿ ಮಾಡಲಾಗುತ್ತದೆ. ಕೊಯ್ಲು ಮಾಡಿದ ಎಳೆಯ ಹಸಿರು ಕಾಯಿಗಳನ್ನು ಕೊಯ್ಲು ಮಾಡಿದ ನಂತರ ಆದಷ್ಟು ಬೇಗನೆ ಸಿಪ್ಪೆ ಸುಲಿಯಬೇಕು, ಮತ್ತು ಸುಲಿದ ಅಡಿಕೆ ಕಾಯಿಯ ತಿರುಳನ್ನು ಮಧ್ಯ ಭಾಗದಲ್ಲಿ ಕತ್ತರಿಸಲಾಗುತ್ತದೆ ಮತ್ತು “ಚೋಗರು” ತುಂಬಿದ ಹಂಡೆಯಲ್ಲಿ 3 - 4 ಗಂಟೆಗಳ ಕಾಲ ಕುದಿಸಲಾಗುತ್ತದೆ, ಒಂದೇ ನೀರಿನಲ್ಲಿ 2 ರಿಂದ 3 ಬ್ಯಾಚ್ ಕಾಯಿಗಳನ್ನು ಕುದಿಸಿದ ನಂತರ ಪಡೆದ ಕೇಂದ್ರೀಕೃತ ಸಾರವನ್ನು ಚೋಗರು ಎನ್ನಲಾಗುತ್ತದೆ. ಬೇಯಿಸಿದ ಅಡಿಕೆಯನ್ನು 5 - 7 ದಿನಗಳ ವರೆಗೆ ನೇರ ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು, ಮತ್ತು ನಂತರ ವಿಂಗಡಿಸಿ ಮಾರಾಟ ಮಾಡಬೊಹುದು. ಹಾಗು ಉತ್ತಮ ಬೆಲೆಯನ್ನು ಪಡೆಯಲು ಒಣಗಿಸಿದ ಅಡಿಕೆಯನ್ನು ಸಂಗ್ರಹಿಸಿ ನಂತರ ಮಾರಬಹುದು. ಕೊಯ್ಲು ಮಾಡಿದ ಹಸಿರು ಎಳೆಯ ಕಾಯಿಗಳ ಬೆಳವಣಿಗೆಯ ಮಟ್ಟವನ್ನು ಆಧರಿಸಿ,100 ಕೆಜಿ ಕಚ್ಚಾ ಎಳೆಯ ಹಸಿರು ಅಡಿಕೆಗೆ 13 ರಿಂದ 17 ಕೆಜಿಯಷ್ಟ್ಟು ಸಂಸ್ಕರಿಸಿ ಒಣಗಿಸಿದ ಕಾಲಿಪಾಕ್ ಅಡಿಕೆಯನ್ನು ಪಡೆಯಬಹುದು.
-
ಚಾಲಿ: ಈ ರೀತಿಯ ಸಂಸ್ಕರಣೆಯನ್ನು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಭಾಗಗಳಲ್ಲಿ ಹಾಗು ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಾಡಲಾಗುತ್ತದೆ. ಸಂಪೂರ್ಣವಾಗಿ ಮಾಗಿದ ಕಾಯಿಗಳನ್ನು ಕೊಯ್ಲು ಮಾಡಿ ನೇರ ಸೂರ್ಯನ ಬೆಳಕಿನಲ್ಲಿ 40 ರಿಂದ 45 ದಿನಗಳವರೆಗೆ ಚೆನ್ನಾಗಿ ಒಣಗಿಸಬೇಕು. ನಂತರ ಸಿಪ್ಪೆ ಸುಲಿದು ತೆಗೆದ ತಿರುಳನ್ನು ವಿಂಗಡಿಸಿ ಮಾರಾಟ ಮಾಡಬೊಹುದು. ಈ ತಿರುಳುಗಳು ಯಾವಾಗಲೂ ಬಿಳಿಯಾಗಿರಬೇಕು. ಆದರೆ ಮಳೆಯಿಂದಾಗಿ ನೀರು ಅಥವಾ ತೇವಾಂಶಕ್ಕೆ ಒಡ್ಡಿಗೊಳ್ಳುವುದು ಅಥವಾ ಚೆನ್ನಾಗಿ ಒಣಗಿಸದಿರುವುದು ಬಿಳಿ ತಿರುಳುಗಳು ಕಪ್ಪಾಗಲು ಕಾರಣವಾಗುತ್ತದೆ. ಪ್ರತಿ ಎಕರೆಗೆ ಸರಾಸರಿಯಾಗಿ 2,000 ಕೆ.ಜಿ ಚಾಲಿ ಇಳುವರಿಯನ್ನು ಪಡೆಯಬಹುದು.
ಅಡಿಕೆ ಬೆಳೆಗೆ ಬರುವ ರೋಗ ಮತ್ತು ಕೀಟಗಳು ಹಾಗು ಅವುಗಳ ನಿಯಂತ್ರಣಗಳ ಬಗ್ಗೆ ಮುಂದಿನ ಲೇಖನೆಯಲ್ಲಿ ಪ್ರಕಟಿಸುತ್ತೇವೆ, ನಮ್ಮೊಂದಿಗೆ ಸಂಪರ್ಕದಲ್ಲಿರಿ.
ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!

